ಬೆಳಕಿನ ಹಬ್ಬ ದೀಪಾವಳಿಯ ಪ್ರಯುಕ್ತ, ಬೇರೆ ಬೇರೆ ಊರುಗಳಲ್ಲಿ ಉದ್ಯೋಗದಲ್ಲಿರುವವರು ತಮ್ಮ ಊರುಗಳಿಗೆ ಮರಳುವ ಸಲುವಾಗಿ  ಸಹಕಾರ  ಸಾರಿಗೆ ನಿಗಮವು ವಿಶೇಷ ಸಾರಿಗೆ ವ್ಯವಸ್ಥೆಯನ್ನು  ಮಾಡಿದೆ. 

ಅಕ್ಟೋಬರ್‌ 24 ರಂದು ನರಕ ಚತುರ್ದಶಿ ಹಾಗೂ 26 ರಂದು ಬಲಿಪಾಡ್ಯಮಿ ಹಬ್ಬದ ಪ್ರಯುಕ್ತ 21 ರಿಂದ 23 ರವರೆಗೆ ಬೆಂಗಳೂರಿನಿಂದ ವಿವಿಧ ಸ್ಥಳಗಳಿಗೆ 1,500 ಹೆಚ್ಚುವರಿ ವಾಹನಗಳ ವಿಶೇಷ ಸಾರಿಗೆ ವ್ಯವಸ್ಥೆ ಕಲ್ಪಿಸಿದೆ.

ಇದನ್ನೂ ಓದಿ: ಪೊಲೀಸರ ಭದ್ರತೆಯೊಂದಿಗೆ ನಡೆದ ಅಕ್ರಮ ಶೆಡ್ ಗಳ ತೆರವು ಕಾರ್ಯಾಚರಣೆ


ರಾಜ್ಯ ಮತ್ತು ಅಂತಾರಾಜ್ಯದ ವಿವಿಧ ಸ್ಥಳಗಳಿಗೆ ಬೆಂಗಳೂರಿನಿಂದ 26 ರಿಂದ 30 ರವರೆಗೆ ವಿಶೇಷ ವಾಹನಗಳ ವ್ಯವಸ್ಥೆ ಮಾಡಲಾಗಿದೆ. ಕೆಂಪೇಗೌಡ ಬಸ್ ನಿಲ್ದಾಣದಿಂದ ಧರ್ಮಸ್ಥಳ, ಕುಕ್ಕೆಸುಬ್ರಮಣ್ಯ, ಶಿವಮೊಗ್ಗ, ಹಾಸನ, ಮಂಗಳೂರು, ಕುಂದಾಪುರ, ಶೃಂಗೇರಿ, ಹೊರನಾಡು, ದಾವಣಗೆರೆ, ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ವಿಜಯಪುರ, ಗೋಕರ್ಣ, ಶಿರಸಿ, ಕಾರವಾರ, ರಾಯಚೂರು, ಕಲಬುರಗಿ, ಬಳ್ಳಾರಿ, ಕೊಪ್ಪಳ, ಯಾದಗಿರಿ, ಬೀದರ್, ತಿರುಪತಿ, ವಿಜಯವಾಡ, ಹೈದರಾಬಾದ್ ಮುಂತಾದ ಸ್ಥಳಗಳಿಗೆ ವಿಶೇಷ ಬಸ್‌ ವ್ಯವಸ್ಥೆ ಇದೆ.

ಮೈಸೂರು ರಸ್ತೆ ಬಸ್ ನಿಲ್ದಾಣದಿಂದ ಮೈಸೂರು, ಹುಣಸೂರು, ಪಿರಿಯಾಪಟ್ಟಣ, ವಿರಾಜಪೇಟೆ, ಕುಶಾಲನಗರ, ಮಡಿಕೇರಿ ಮಾರ್ಗದ ಕಡೆ ಬಸ್‌ ಸಂಚಾರ ಮಾಡಲಿದೆ.


ತಮಿಳುನಾಡು ಮತ್ತು ಕೇರಳ ಕಡೆಗೆ ಅಂದರೆ ಮಧುರೈ, ಕುಂಬಕೋಣಂ, ಚೆನ್ನೈ, ಕೊಯಮತ್ತೂರ್, ತಿರುಚಿ, ಪಾಲಕ್ಕಾಡ್, ತ್ರಿಶೂರ್, ಏರ್ನಾಕುಲಂ, ಕ್ಯಾಲಿಕಟ್ ಮುಂತಾದ ಸ್ಥಳಗಳಿಗೆ ತೆರಳಲು ಶಾಂತಿನಗರದಲ್ಲಿನ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಬಸ್ ನಿಲ್ದಾಣದಿಂದ ಬಸ್‌ ವ್ಯವಸ್ಥೆ ಮಾಡಲಾಗಿದೆ.

ಬೆಂಗಳೂರು ನಗರದ ವಿಜಯನಗರ, ಜಯನಗರ 4ನೇ ಬ್ಲಾಕ್, ಜಾಲಹಳ್ಳಿ ಕ್ರಾಸ್, ನವರಂಗ್ (ರಾಜಾಜಿನಗರ), ಮಲ್ಲೇಶ್ವರಂ 18ನೇ ಅಡ್ಡ ರಸ್ತೆ, ಬನಶಂಕರಿ, ಜೀವನ ಭೀಮಾನಗರ, ಐಟಿಐ ಗೇಟ್, ಗಂಗಾನಗರ, ಕೆಂಗೇರಿ ಉಪನಗರ ಮುಂತಾದ ಸ್ಥಳಗಳಿಂದ ಪ್ರಯಾಣಿಕರ ಅಗತ್ಯಗಳಿಗನುಗುಣವಾಗಿ ಶಿವಮೊಗ್ಗ, ದಾವಣಗೆರೆ, ಮಂಗಳೂರು, ಕುಂದಾಪುರ, ಶೃಂಗೇರಿ, ಹೊರನಾಡು, ಕುಕ್ಕೇಸುಬ್ರಮಣ್ಯ, ಧರ್ಮಸ್ಥಳ ಮುಂತಾದ ಮಾರ್ಗಗಳಿಗೆ ಹೆಚ್ಚುವರಿ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ.

ಪ್ರಯಾಣಿಕರ ಅನುಕೂಲಕ್ಕಾಗಿ ಹೆಚ್ಚುವರಿ ಸಾರಿಗೆ ಮುಂಗಡವಾಗಿ ಆಸನಗಳನ್ನು ಕಾಯ್ದಿರಿಸುವ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಕರ್ನಾಟಕ ಹಾಗೂ ಅಂತಾರಾಜ್ಯದಲ್ಲಿ ಇರುವ 691 ಗಣಕೀಕೃತ ಬುಕ್ಕಿಂಗ್ ಕೌಂಟರ್‌ಗಳ ಮೂಲಕ ಮುಂಗಡವಾಗಿ ಆಸನಗಳನ್ನು ಕಾಯ್ದಿರಿಸಬಹುದಾಗಿದೆ. ನಾಲ್ಕು ಅಥವಾ ಹೆಚ್ಚು ಪ್ರಯಾಣಿಕರು ಒಟ್ಟಾಗಿ ಮುಂಗಡ ಟಿಕೆಟ್‌ ಕಾಯ್ದಿರಿಸಿದಲ್ಲಿ ಶೇಕಡ 5ರಷ್ಟು ರಿಯಾಯಿತಿ ಹಾಗೂ ಹೋಗುವ & ಬರುವ ಪ್ರಯಾಣದ ಟಿಕೆಟ್‍ ಅನ್ನು ಒಟ್ಟಿಗೆ ಕಾಯ್ದಿರಿಸಿದಾಗ ಬರುವ ಪ್ರಯಾಣ ದರದಲ್ಲಿ ಶೇಕಡ 10ರಷ್ಟು ರಿಯಾಯಿತಿ ನೀಡಲಾಗುತ್ತಿದೆ.

ನಿಗಮದ ಸಂಚಾರ ವ್ಯಾಪ್ತಿಯಲ್ಲಿನ ಎಲ್ಲ ತಾಲೂಕು, ಜಿಲ್ಲಾ ಬಸ್ ನಿಲ್ದಾಣಗಳಿಂದ ಪ್ರಯಾಣಿಕರ ಸಂಖ್ಯೆಗಳಿಗನುಗುಣವಾಗಿ ವಿಶೇಷ ಬಸ್‌ಗಳು ರಸ್ತೆಗಿಳಿಯಲಿವೆ ಎಂದು ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.

ಮುಂಗಡ ಬುಕ್ಕಿಂಗ್ ಮಾಡಿದಲ್ಲಿ ದೊರೆಯಲಿದೆ ರಿಯಾಯಿತಿ ಸೌಲಭ್ಯ:

ನಾಲ್ಕು ಅಥವಾ ಹೆಚ್ಚು ಪ್ರಯಾಣಿಕರು ಒಟ್ಟಾಗಿ ಮುಂಗಡ ಕಾಯ್ದಿರಿಸಿದ್ದಲ್ಲಿ ಶೇಕಡ 5 ರಷ್ಟು ರಿಯಾಯಿತಿ ದೊರೆಯಲಿದೆ ಹಾಗೂ ತೆರಳುವ ಹಿಂದಿರುಗುವ ಪ್ರಯಾಣದ ಟಿಕೆಟ್ ನ್ನು ಒಟ್ಟಿಗೆ ಕಾಯ್ದಿರಿಸಿದಾಗ ಬರುವ ಪ್ರಯಾಣ ದರದಲ್ಲಿ ಶೇ 10 ರಷ್ಟು ರಿಯಾಯಿತಿ ನೀಡಲಾಗುತ್ತದೆ. ನೆರೆ ರಾಜ್ಯಗಳಾದ ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಕೇರಳ, ಗೋವಾ, ಮಹಾರಾಷ್ಟ್ರ ಹಾಗೂ ಪುದುಚೇರಿಯಲ್ಲಿ ಇರುವ ಪ್ರಮುಖ ನಗರಗಳಲ್ಲಿ ನಿಗಮದ ಮುಂಗಡ ಆಸನಗಳನ್ನು ಕಾಯ್ದಿರಿಸುವ ಕೌಂಟರ್​ಗಳಿದ್ದು, ಇವುಗಳ ಮೂಲಕ ಸಹ ಮುಂಗಡವಾಗಿ ಆಸನಗಳನ್ನು ನಿಗಮದ ಸಾರಿಗೆಗಳಿಗೆ ಕಾಯ್ದಿರಿಸಬಹುದಾಗಿದೆ.



ಸಂಚರಿಸುವ ಹೆಚ್ಚುವರಿ ಸಾರಿಗೆಗಳು, ಅವುಗಳು ಹೊರಡುವ ಸ್ಥಳ ಹಾಗೂ ವೇಳಾ ವಿವರಗಳನ್ನು ಮುಂಗಡವಾಗಿ ಆಸನಗಳನ್ನು ಕಾಯ್ದಿರಿಸುವ ಅಂತರ್ಜಾಲ ವ್ಯವಸ್ಥೆಯಲ್ಲಿ ಹಾಗೂ ಕರಾರಸಾ ನಿಗಮದ ವೆಬ್‍ಸೈಟ್‍ನಲ್ಲಿ ಸಾರ್ವಜನಿಕ ಮಾಹಿತಿಗಾಗಿ ಒದಗಿಸಲಾಗಿದೆ ಹಾಗೂ ಸದರಿ ಹೆಚ್ಚುವರಿ ಸಾರಿಗೆಗಳಲ್ಲಿ ಸಂಚರಿಸುವ ಪ್ರಯಾಣಿಕರು ಕಾಯ್ದಿರಿಸುವ ಮುಂಗಡ ಚೀಟಿಗಳಲ್ಲೂ ಕೂಡ ವಾಹನ ಹೊರಡುವ ಸ್ಥಳದ ವಿವರ ನಮೂದಿಸಲಾಗಿದೆ. ಅಲ್ಲದೇ, ನಿಗಮದ ವ್ಯಾಪ್ತಿಯಲ್ಲಿನ ಎಲ್ಲಾ ತಾಲೂಕು ಅಥವಾ ಜಿಲ್ಲಾ ಬಸ್ ನಿಲ್ದಾಣಗಳಿಂದ ಸಂಚಾರ ಒತ್ತಡಕ್ಕನುಗುಣವಾಗಿ ವಿಶೇಷ ಸಾರಿಗೆಗಳ ವ್ಯವಸ್ಥೆ ಮಾಡಲಾಗುವುದು ಎಂಬುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಕೊರೋನ ನಿಯಮಾವಳಿಗಳು ಹಾಗೂ ಸೋಂಕಿನ ತೀವ್ರತೆ ಕಡಿಮೆಯಿರುವುದರಿಂದ ಈ ಬಾರಿಯ ದೀಪಾವಳಿ ಆಚರಣೆಗೆ ಮುಕ್ತವಾದ ಅವಕಾಶಗಳಿದೆ. ಅಲ್ಲದೇ ಸಡಗರ ಸಂಭ್ರಮದಿಂದ ಹಬ್ಬವನ್ನು ಆಚರಿಸುವ ಸಲುವಾಗಿ ತಮ್ಮ ತಮ್ಮ ಊರುಗಳಿಗೆ ತೆರಳುವ ಪ್ರಯಾಣಿಕರಿಗೆ ಯಾವುದೇ ರೀತಿಯ ತೊಂದರೆಯಾಗದೆ ಇರುವ ಸಲುವಾಗಿ ಹೆಚ್ಚುವರಿ ವ್ಯವಸ್ಥೆಯನ್ನು KSRTC ಸಂಸ್ಥೆ ಕಲ್ಪಿಸಿದೆ.