ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಇಂಜಿನಿಯರ್ ಮಹಿಳೆಯೋರ್ವರಿಗೆ Phd ಹೆಸರಿನಲ್ಲಿ ಅಪಾರ ಪ್ರಮಾಣದ ಹಣವನ್ನು ವಂಚನೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ .

ಆನ್‌ಲೈನ್‌ನಲ್ಲಿ ನೆಸ್ಟರ್‌ ವಿಶ್ವವಿದ್ಯಾಲಯದ ಪಿಎಚ್‌.ಡಿ ಕೋರ್ಸ್‌ಗೆ ದಾಖಲಾಗಿ, ₹ 73.68 ಲಕ್ಷ ಹಣ ಕಳೆದುಕೊಂಡಿರುವುದಾಗಿ ಬಸವನಹಳ್ಳಿ ಬಡಾವಣೆಯ ಎಂಜಿನಿಯರ್‌ ಮಹಿಳೆಯೊಬ್ಬರುನಗರದ ಸಿಇಎನ್‌ ಠಾಣೆಗೆ ದೂರು ನೀಡಿದ್ದಾರೆ.

ಇದನ್ನೂ ಓದಿ: ಕೊಲೆ ಮಾಡಿ ಶವ ಎಸೆಯಲು ಹೋದವರು ಖಾಕಿ ಬಲೆಗೆ

2018ರಲ್ಲಿ ಪಿಎಚ್‌.ಡಿ ಅಧ್ಯಯನ ನಿಟ್ಟಿನಲ್ಲಿ ಗೂಗಲ್‌ನಲ್ಲಿ ಸರ್ಚ್‌ ಮಾಡುವಾಗ ನೆಸ್ಟರ್‌ ಯೂನಿವರ್ಸಿಟಿ (NESTOR University) ಲಿಂಕ್‌ ಈ ಮಹಿಳೆಗೆ ಕಾಣಿಸಿತ್ತು ಎನ್ನಲಾಗಿದ್ದು, ಈ ಕುರಿತು ಅಗತ್ಯವಿದ್ದ ದಾಖಲೆಗಳನ್ನು ಮಾಹಿತಿಯನ್ನು ಮಹಿಳೆ ಭರ್ತಿ ಮಾಡಿದ್ದರು phd ಪಡೆದುಕೊಳ್ಳುವ ಭರವಸೆಯಲ್ಲಿದ್ದರು. 



ಅವರು ಕಳಿಸಿದ್ದ ಖಾತೆಗೆ ಸಿಟಿ ಬ್ಯಾಂಕ್‌, ಎಚ್‌ಡಿಎಫ್‌ಸಿ ಮತ್ತು ಇತರ ಬ್ಯಾಂಕ್‌ ಮೂಲಕ ಹಂತಹಂತವಾಗಿ ಈವರೆಗೆ ಒಟ್ಟು ₹ 73.68 ಲಕ್ಷ (91,947 ಡಾಲರ್‌) ಆನ್‌ಲೈನ್‌ನಲ್ಲಿ ಹಣ ಪಾವತಿಯಾಗಿದ್ದು, ಹಣ ಪಾವತಿಸಿಕೊಂಡು ಮೋಸ ಮಾಡಿರುವವರನ್ನು ಪತ್ತೆ ಮಾಡಿ, ಹಣ ವಾಪಸ್‌ ಕೊಡಿಸಬೇಕು ಎಂದು ದೂರಿನಲ್ಲಿ ಮಹಿಳೆ ಪೊಲೀಸರನ್ನು ಕೋರಿದ್ದಾರೆ. 

ಹಣ ಮರಳಿ ಪಡೆಯಲು ಬೇಕು ಅಮೆರಿಕದ ಕೋರ್ಟ್ ಅನುಮತಿ: 

ಮಹಿಳೆಯು ಹಣ ವರ್ಗಾಯಿಸಿರುವ ಖಾತೆಗಳ ವಿವರವನ್ನು ಪೊಲೀಸರು ಪಡೆದಿದ್ದು, ಅಮೆರಿಕದ ಬ್ಯಾಂಕ್‌ಗಳಿಗೆ ಜಮೆಯಾಗಿದೆ. ಹಣ ಫ್ರೀಜ್‌ ಮಾಡಿಸಲು ಪ್ರಯತ್ನಿಸಿದೆವು. ಅದಕ್ಕೆ ಅಮೆರಿಕದ ಕೋರ್ಟ್‌ ಅನುಮತಿ ಬೇಕು. ಹೀಗಾಗಿ, ಇಂಟರ್‌ಪೋಲ್‌ ಮೂಲಕ ಮುಂದುವರಿಯಲು ಚಿಂತನೆ ನಡೆಸಿದ್ದೇವೆ ಎಂದು ಸಿಇಎನ್‌ ಠಾಣೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮೊಬೈಲ್‌ ಫೋನ್‌ ಟವರ್‌ ಲೊಕೇಷನ್‌ ಪರಿಶೀಲಿಸಿದಾಗ ಉತ್ತರ ಅಮೆರಿಕ ಪ್ರದೇಶ ತೋರಿಸಿದೆ. ಇದೊಂದು ನಕಲಿ ವಿಶ್ವವಿದ್ಯಾಲಯ ಇರಬಹುದು. ತನಿಖೆಯಲ್ಲಿ ಮುಂದುವರೆದಿದ್ದೇವೆ ಎಂಬುದಾಗಿ ಅಧಿಕಾರಿಗಳು ತಿಳಿಸಿದ್ದು ಮೊಬೈಲ್ ಬಳಕೆದಾರರು ಈ ಕುರಿತು ಜಾಗರೂಕತೆ ವಹಿಸಬೇಕಿದೆ. 



ಇತ್ತೀಚಿನ ದಿನಗಳಲ್ಲಿ ಆನ್ಲೈನ್ ಮೂಲಕ ವಂಚನೆಗಳನ್ನು ಕಿಡಿಗೇಡಿಗಳು ನಡೆಸುತ್ತಿದ್ದು, ಅನೇಕರು ಹಣ ಕಳೆದುಕೊಂಡು ಮರುಗುವ ಸ್ಥಿತಿ ನಿರ್ಮಾಣವಾಗಿದೆ. ಉದ್ಯೋಗ ಕೊಡಿಸುವ ನೆಪದಲ್ಲಿ, ದುಬಾರಿ ಹಣದ ಗಿಫ್ಟ್ ಗಳನ್ನು ಕಳುಹಿಸುವ ಸುಳ್ಳು ಹೇಳಿಕೊಂಡು ಅನೇಕರನ್ನು ಈ ಚಾಲಾಕಿಗಳು ಯಾಮಾರಿಸುತ್ತಿದ್ದು. ಅನಾಮಿಕರ ಯಾವುದೇ ನಂಬರ್ ಗಳಿಂದ ಸಂದೇಶಗಳು ಅಥವಾ ಕರೆಗಳು ಬಂದರೆ ಅದನ್ನು ಬ್ಲಾಕ್ ಮಾಡುವ ಮುಖೇನ ಹಾಗೂ ಕೂಡಲೇ ಪೊಲೀಸರಿಗೆ ಈ ಕುರಿತು ಮಾಹಿತಿ ನೀಡುವ ಮೂಲಕ ಇಂತಹ ಘಟನೆಗಳಿಂದ ತಪ್ಪಿಸಿಕೊಳ್ಳಬಹುದಾಗಿದೆ. ಅಂತೆಯೇ ಎಚ್ಚರಿಕೆ ವಹಿಸುವುದು ಸೂಕ್ತ.