ಗೋ ಕಳ್ಳತನ ಮಾಡಿದ ಆರೋಪಿಗಳಿಗೆ ನರಸಿಂಹರಾಜಪುರ ತಾಲ್ಲೂಕಿನ ಜೆ.ಎಂ.ಎಫ್.ಸಿ ನ್ಯಾಯಾಲಯವು ದಂಡ ವಿಧಿಸಿ ತೀರ್ಪು ನೀಡಿದೆ. 2016ರ ಆಗಸ್ಟ್ 26 ರಂದು ಚಿಕ್ಕಮಗಳೂರು ಜಿಲ್ಲೆ ನರಸಿಂಹರಾಜಪುರ ತಾಲ್ಲೂಕಿನ‌ ಬಾಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯ‌ ಬಿ. ಕಣಬೂರು ಗ್ರಾಮದ ರಂಭಾಪುರಿ ಮಠದ ವ್ಯಾಪ್ತಿಯಲ್ಲಿ ಬರುವ ಬಾಳೆಹೊನ್ನೂರು - ಮೇಲ್ಪಾಲ್, ಕೊಪ್ಪ ಮುಖ್ಯ ಟಾರು ರಸ್ತೆಯ ಬದಿಯಲ್ಲಿ ಮೇಯುತ್ತಿದ್ದ ಎರಡು ಎತ್ತುಗಳನ್ನು ಇಸ್ಮಾಯಿಲ್, ಅನ್ವರ್, ಹನೀಫ್, ಆರೀಫ್ ಹಾಗೂ ಆಶ್ರಫ್ ಎಂಬ ಆರೋಪಿಗಳು ಕಳ್ಳತನ ಮಾಡಿ ಮಾಂಸ ಮಾಡಿ ಮಾರಾಟ ಮಾಡುವ ಉದ್ದೇಶದಿಂದ ಆರೋಪಿ ಇಸ್ಮಾಯಿಲ್ ನ ಮನೆ ಹಿಂದಿನ ಶೆಡ್‌ನಲ್ಲಿ ಕಡಿದು ಗೋ ಮಾಂಸ ಮಾಡುತ್ತಿದ್ದಾಗ ಬಾಳೆಹೊನ್ನೂರು ಪೊಲೀಸರು ದಾಳಿ ನಡೆಸಿ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಪಟ್ಟಿ ಸಲ್ಲಿಸಿದ್ದರು.

 ಪ್ರಕರಣದ ವಿಚಾರಣೆ ನಡೆಸಿದ ನರಸಿಂಹರಾಜಪುರ ತಾಲ್ಲೂಕಿನ ಸಿವಿಲ್ ಜಡ್ಜ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯದ ನ್ಯಾಯಾಧೀಶೆಯಾದ ಬಿ.ಪ್ರಿಯಾಂಕ ಅವರು ಆರೋಪಿಗಳನ್ನು ದೋಷಿ ಎಂದು ತೀರ್ಪು ನೀಡಿ, ಆರೋಪಿಗಳಿಗೆ ಭಾರತೀಯ ದಂಡ ಸಂಹಿತೆ ಕಲಂ 379 ಅಡಿಯಲ್ಲಿ ಮಾಡಿರುವ ಅಪರಾಧಕ್ಕೆ ತಲಾ 200 ದಂಡ ಮತ್ತು ಕರ್ನಾಟಕ ಗೋ ಹತ್ಯೆ ನಿಷೇಧ ಕಾಯ್ದೆ ಕಲಂ ೪ರ ಅಪರಾಧಕ್ಕೆ ತಲಾ 1000 ದಂಡ ಹಾಗೂ ಕಲಂ ೬ರ ಅಪರಾಧಕ್ಕೆ ತಲಾ 1000 ದಂಡ ವಿಧಿಸಿ ತೀರ್ಪು ನೀಡಿದ್ದಾರೆ.