ಮೂಡಿಗೆರೆ ಪಟ್ಟಣದ ತಾಲೂಕು ಕಚೇರಿಯ ಒಳಾಂಗಣದಲ್ಲಿ ಆಂಜನೇಯ ದೇವಸ್ಥಾನವನ್ನು ನಿರ್ಮಿಸುತ್ತಿರುವುದರ ವಿರುದ್ಧ ಕಾಂಗ್ರೆಸ್ ಪಕ್ಷ ಹಾಗೂ ಕೆಲವು ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.

ಮೂಡಿಗೆರೆ ಪಟ್ಟಣದ ಬೇಲೂರು ರಸ್ತೆಯಲ್ಲಿ ಮಿನಿವಿಧಾನಸೌಧದ ಕಟ್ಟಡ ನಿರ್ಮಾಣ ಹಂತದಲ್ಲಿದ್ದು, ಈ ಕಟ್ಟಡದ ಒಳಾಂಗಣದಲ್ಲಿ ಆಂಜನೇಯ ಸ್ವಾಮಿ ದೇವಾಲಯವನ್ನು ನಿರ್ಮಿಸಲಾಗುತ್ತಿದೆ. ಸರಕಾರಿ ಕಟ್ಟಡದ ಒಳಾಂಗಣದಲ್ಲಿ ಒಂದು ಧರ್ಮಕ್ಕೆ ಸೀಮಿತವಾದ ಗುಡಿಯನ್ನು ನಿರ್ಮಿಸುತ್ತಿರುವುದು ಸಂವಿಧಾನದ ಜಾತ್ಯಾತೀತ ತತ್ವಗಳಿಗೆ ವಿರುದ್ಧವಾದ ನಿಲುವಾಗಿರುವ ಕಾರಣ, ತಾಲೂಕು ಆಡಳಿತವು ಈ ಕೂಡಲೇ  ದೇವಸ್ಥಾನ ನಿರ್ಮಾಣದ ಯೋಜನೆಯನ್ನು ಕೈಬಿಡಬೇಕು ಎಂದು ಕಾಂಗ್ರೆಸ್ ಮುಖಂಡ ಹಾಗೂ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಎಂ.ಎಸ್.ಅನಂತ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ,

ಮಿನಿವಿಧಾನಸೌಧವು ಸರ್ಕಾರದ ಆಡಳಿತ ವ್ಯವಸ್ಥೆಯ ಭಾಗವಾಗಿದ್ದು ತಾಲೂಕು ಕಚೇರಿ ಯಾವುದೇ ವ್ಯಕ್ತಿಯ ಅಥವಾ ಯಾವುದೇ ಒಂದು ಧರ್ಮಕ್ಕೆ ಸೀಮಿತವಾದುದಲ್ಲ, ಅಲ್ಲಿ ಎಲ್ಲಾ ಧರ್ಮದವರಿಗೂ ಹಕ್ಕಿದ್ದು ಸರಕಾರಿ ಕಟ್ಟಡಗಳು ಸಾರ್ವಜನಿಕರಿಗೆ ಸೇವೆ ನೀಡುವ ಕೇಂದ್ರಗಳಾಗಿವೆ, ಇಂತಹ ಕಟ್ಟಡಗಳ ಆವರಣದಲ್ಲಿ ದೇವಸ್ಥಾನ ನಿರ್ಮಾಣದಂತಹ ಯೋಜನೆಗಳನ್ನು ಕೈಗೊಳ್ಳುವ ಮುನ್ನ ಏಕಪಕ್ಷೀಯ ತೀರ್ಮಾನ ಕೈಗೊಳ್ಳುವುದು ಅಪಾಯಕಾರಿ ಬೆಳವಣಿಗೆಯಾಗಿದ್ದು ಮುಂದೆ ಇದೇ ಕಟ್ಟಡದ ಆವರಣದಲ್ಲಿ ಮಸೀದಿ, ಚರ್ಚು ನಿರ್ಮಿಸಿ ಎಂದು ಸಾರ್ವಜನಿಕರು ಬೇಡಿಕೆ ಇಟ್ಟಲ್ಲಿ ತಾಲೂಕು ಆಡಳಿತ ಇದನ್ನು ಈಡೇರಿಸಲು ಸಾಧ್ಯವೇ ಎಂದು  ಪ್ರಶ್ನಿಸಿದ್ದಾರೆ.

ಇಡೀ ದೇಶದ ಜನರು ಕೊರೋನ ಸೋಂಕಿನಿಂದಾಗಿ ಸಂಕಷ್ಟದ ದಿನಗಳನ್ನು ನಡೆಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಅನಗತ್ಯವಾಗಿರುವ ದೇವಾಲಯ ನಿರ್ಮಾಣದ ಹೆಸರಿನಲ್ಲಿ ದುಂದು ವೆಚ್ಚ ಮಾಡುತ್ತಿರುವುದು ಸರಿಯಲ್ಲ. ಸರಕಾರದ ಕೆಲಸ ದೇವರ ಕೆಲಸ ಎನ್ನಲಾಗುತ್ತದೆ. ಅಂದರೆ ಸರಕಾರಿ ಕಚೇರಿಗಳು ಸಾರ್ವಜನಿಕರಿಗೆ ಸೇವೆ ನೀಡುವ ಕೇಂದ್ರಗಳಾಗಿದ್ದು, ಸರಕಾರಿ ಕಚೇರಿಯೇ ದೇವಾಲಯಗಳಾಗಿವೆ. ಇಂತಹ ಸಂದರ್ಭದಲ್ಲಿ ಸರಕಾರಿ ಕಚೇರಿಯ ಒಳಗೆ ಗುಡಿ ನಿರ್ಮಿಸುವ ಯೋಜನೆ ಯಾರದ್ದು ಎಂಬುದನ್ನು ತಾಲೂಕು ಆಡಳಿತ ಸ್ಪಷ್ಟನೆ ನೀಡಬೇಕೆಂದು ಎಂ.ಎಸ್.ಅನಂತ್ ಆಗ್ರಹಿಸಿದ್ದಾರೆ.

ಪಟ್ಟಣ ಪಂಚಾಯತ್ ಸದಸ್ಯ ಹೊಸಕೆರೆ ರಮೇಶ್ ಮಾತನಾಡಿ, ತಾಲೂಕು ಕಚೇರಿಯಲ್ಲಿ ಆನೆ ನಡೆದದ್ದೇ ದಾರಿ ಎಂಬಂತಾಗಿದೆ. ಮುಜರಾಯಿ ಇಲಾಖೆಯಡಿ ಬರುವ ಅನೇಕ ದೇವಾಲಯಗಳು ಜೀರ್ಣೋದ್ಧಾರ ಕಾಣದೇ ಶಿಥಿಲಾವಸ್ಥೆಯಲ್ಲಿವೆ. ತಾಲೂಕು ಆಡಳಿತಕ್ಕೆ ನೈತಿಕತೆ ಇದ್ದಲ್ಲಿ ಮೊದಲು ಸರಕಾರದ ಈ ದೇವಾಲಯಗಳನ್ನು ಜೀರ್ಣೋದ್ಧಾರ ಮಾಡಲಿ. ಅದನ್ನು ಜನರ ತೆರಿಗೆ ಹಣವನ್ನು ಹೀಗೆ ಪೋಲು ಮಾಡುವುದನ್ನು ಒಪ್ಪಲು ಸಾಧ್ಯವಿಲ್ಲ. ಸರಕಾರಿ ಕಚೇರಿಯಲ್ಲಿ ಒಂದು ಧರ್ಮಕ್ಕೆ ಮಾತ್ರ ಸೀಮಿತವಾದ ಗುಡಿ ನಿರ್ಮಿಸುವುದು ಸರಕಾರವೇ ಧಾರ್ಮಿಕ ತಾರತಮ್ಯದ ಪರಮಾವಧಿಯಾಗಿದೆ. ಇದು ಸಂವಿಧಾನದ ಆಶಗಳಿಗೆ ವಿರುದ್ಧವಾದ ನಡೆಯಾಗಿದ್ದು, ಕೂಡಲೇ ಗುಡಿ ನಿರ್ಮಾಣದ ಅಪ್ರಸ್ತುತ ನಿರ್ಧಾರವನ್ನು ಕೈಬಿಟ್ಟು, ಕೋವಿಡ್ ಸಂಕಷ್ಟದಲ್ಲಿರುವ ಜನರಿಗೆ ನೆರವು ಕಲ್ಪಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಬೇಕೆಂದು ಒತ್ತಾಯಿಸಿದ್ದಾರೆ.